Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಪ್ರತಿಷ್ಠೆಯ ಮುಂದೆ ಮಕ್ಕಳ ಭವಿಷ್ಯಗಳನ್ನು ಅಡವಿಡದಿರಿ..!!*

- ಸ್ನೇಹಜೀವಿ ಅಡ್ಕ
Published on Friday, June 24 2016
img

ಶ್ವೇತಾ..!!
[www.asiavisionnews.com ] ಸರ್ಕಾರೀ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯ ಮಗಳು.ಊರಿನ ಸರ್ಕಾರಿ ಶಾಲೆಯಲ್ಲಿ ಸರಾಸರಿ ತೊಂಬತ್ತು ಶೇಕಡಾ ಫಲಿತಾಂಶಗಳು ಬರುತ್ತಿದ್ದರೂ ಶ್ವೇತಾಳನ್ನು ದುಬಾರಿ ಶುಲ್ಕ ಪಾವತಿಸಿ ಪ್ರತಿಷ್ಠಿತ ಶಾಲೆಗೆ ಎಸ್ಸೆಸ್ಸಲ್ಸಿಗೆ ಸೇರಿಸಿದರು.
ಕಲಿಕೆಯಲ್ಲಿ ಸ್ವಲ್ಪ ಹಿಂದಿದ್ದ ಶ್ವೇತಾಳಿಗೆ ತಾನ್ಯಾಕೆ ಕಲಿಕೆಯಲ್ಲಿ ಹಿಂದಿದ್ದೇನೆ ಅನ್ನುವುದಕ್ಕಿಂತಲೂ ತಂದೆಯ ವರ್ತನೆಗಳು ಆಕೆಯನ್ನು ಹೆಚ್ಚು ಚಿಂತೆಗೀಡು ಮಾಡುವಂತಿತ್ತು.
ಅದೆಷ್ಟೇ ಓದಿದರೂ ಅರ್ಥವಾಗದ ಪಾಠಗಳು ಕೆಲವೊಮ್ಮೆ ಶ್ವೇತಾಳಿಗೆ ಮಾನಸಿಕ ಯಾತನೆಯನ್ನು ನೀಡುತ್ತಿದ್ದರೆ, ಎಸ್ಸೆಸ್ಸಲ್ಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾಗಬೇಕು ಅನ್ನುವ ತಂದೆಯ ಕಟ್ಟಾಜ್ಞೆಯು ಶ್ವೇತಾಳನ್ನು ಇನ್ನಷ್ಟು ಹೈರಾಣಾಗಿಸುವ ಜತೆಗೆ ,ಭಯವನ್ನು ಮೂಡಿಸಿತು.
ಮೊದ ಮೊದಲು ಸ್ವಲ್ಪವಾದರೂ ಅರ್ಥವಾಗುತ್ತಿದ್ದ ಪಾಠಗಳು ಕ್ರಮೇಣ ತಂದೆಯ ಮೇಲಿನ ಭಯದಿಂದಾಗಿ ಅದೆಷ್ಟು ಓದಿದರೂ ಅರ್ಥವಾಗದ ಮಟ್ಟಿಗೆ ಬಂದು ನಿಂತವು. ಸರ್ಕಾರೀ ಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ಶ್ವೇತಾಳಿಗೆ ಖಾಸಗಿ ಶಾಲೆಯಲ್ಲಿ ಒಂದು ಕಡೆಯಿಂದ ತಂದೆಯ ಪ್ರತಿಷ್ಠೆಗೋಸ್ಕರ ತಾನು ಎಸ್ಸೆಸ್ಸಲ್ಸಿಯಲ್ಲಿ ಉನ್ನತ ಅಂಕ ಗಳಿಸಬೇಕಾಗಿತ್ತು,ಮತ್ತೊಂದು ಕಡೆಯಲ್ಲಿ ಶಾಲೆಯ ಪ್ರತಿಷ್ಠೆಗೋಸ್ಕರ ಆಕೆಗೆ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಳ್ಳಲೇಬೇಕೆಂಬ ಒತ್ತಡಕ್ಕೆ ಒಳಗಾದಳು..!!
ಮೊದಲೇ ಮಾನಸಿಕವಾದ ಯಾತನೆಗಳನ್ನು ಅನುಭವಿಸುತ್ತಿದ್ದ ಶ್ವೇತಾಳ ಮನಸ್ಥಿತಿಯನ್ನು ಅರ್ಥೈಸುವ ಪ್ರಯತ್ನ ಆಕೆಯ ಅಪ್ಪನಿಗೋ,ಶಾಲೆಯ ಪ್ರಾಧ್ಯಾಪಕರಿಗೋ ಬೇಡವಾಗಿತ್ತು.ಅವರಿಗಿಬ್ಬರಿಗೂ ಬೇಕಾಗಿದ್ದದ್ದು ತಮ್ಮ ತಮ್ಮ ಪ್ರತಿಷ್ಠೆಗಳಾಗಿತ್ತು.
ಕಷ್ಟಪಟ್ಟು ಓದುವ ಅಂತ ಪುಸ್ತಕ ತೆಗೆದು ಕಣ್ಣಾಯಿಸುವಾಗ ಅವಳಿಗೆ ಒಂದು ಕಡೆಯಿಂದ ತಂದೆಯ ಕರುಣೆಯಿಲ್ಲದ ಮುಖ ಭೀಭತ್ಸ ರೂಪದಲ್ಲಿ ಪ್ರತ್ಯಕ್ಷವಾದರೆ,ಮತ್ತೊಂದು ಕಡೆಯಿಂದ ದುಬಾರಿ ಶುಲ್ಕವನ್ನು ಪಡೆದು ಸಹಪಾಠಿಗಳ ನಡುವೆ ಅವಮಾನಿಸಿ ತನ್ನನ್ನು ಅಣಕಿಸಿದ ಪ್ರಾಧ್ಯಾಪಕರ ಮುಖಗಳು ಅವಳಿಗೆ ಕಾಣಿಸುತ್ತಿತ್ತೇ ವಿನಃ ಕಲಿಯುವಂತಹ ಮನಸ್ಸು ಬರುತ್ತಲೇ ಇರಲಿಲ್ಲ.
ಕೊನೆಗೂ ಎಸ್ಸೆಸ್ಸಲ್ಸಿ ಪಬ್ಲಿಕ್ ಪರೀಕ್ಷೆಯ ದಿನಾಂಕ ಘೋಷಣೆಯಾಯಿತು.ಕಷ್ಟಪಟ್ಟು ಕಲಿಯುತ್ತಿರುವಾಗ ಅಪ್ಪನ "ಒಂದು ವೇಳೆ ನೀನು ಉತ್ತೀರ್ಣಳಾಗದೆ ನನ್ನ ಪ್ರತಿಷ್ಠೆಗೆ ಧಕ್ಕೆ ತಂದರೆ ಮನೆಗೆ ಬರಬಾರದು " ಅನ್ನುವ ಕಟ್ಟಾಜ್ಞೆಯಾದರೆ ಶಾಲೆಯಲ್ಲಿ ಅಧ್ಯಾಪಕರು " ನೀನು ಅನುತ್ತೀರ್ಣಳಾಗಿ ನಮ್ಮ ಶಾಲೆಗೆ ಕೆಟ್ಟ ಹೆಸರು ತರಬಾರದು " ಅನ್ನುವ ಮಾತುಗಳು ಆಕೆಯ ಕಿವಿಗಪ್ಪಳಿಸುತ್ತಲೇ ಇತ್ತು.
ಅಂತೂ ಪರೀಕ್ಷೆ ಬರೆದ ಶ್ವೇತಾಳು ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಳು.ಅದೊಂದು ದಿನ ಪರೀಕ್ಷೆಯ ಫಲಿತಾಂಶ ಪ್ರಕಟವಾಯಿತು.ತಾಯಿಯ ಮೊಬೈಲ್ ತೆಗೆದು ಪರೀಕ್ಷೆಯ ಫಲಿತಾಂಶ ನೋಡುವಷ್ಟರಲ್ಲಿ ಶ್ವೇತಾ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದಳು..!!
ಅಮ್ಮ ಮಾತು ಪ್ರಾರಂಭಿಸುವ ಮುನ್ನವೇ ಫಲಿತಾಂಶ ಪ್ರಕಟವಾಗಿಲ್ಲ ಅನ್ನುವ ಸುಳ್ಳು ಹೇಳಿದ ಶ್ವೇತಾಳಿಗೆ ಒಂದು ಕಡೆಯಿಂದ ತಂದೆಯ ಭಯ ,ಮತ್ತೊಂದು ಕಡೆಯಲ್ಲಿ ಶಾಲೆಯಲ್ಲಿ ಅದೇನು ಅನ್ನುವರೋ ಅನ್ನುವ ಭಯ ಕಾಡಿ ಮನೆ ಬಿಟ್ಟು ಹೊರಟೇ ಹೋದಳು,ಮನೆಬಿಟ್ಟು ಹೋದ ಶ್ವೇತ ಪತ್ತೆಯಾದದ್ದು ಮಾತ್ರ ಹೆಣವಾಗಿ..!!
ಇದೊಂದು ಕಾಲ್ಪನಿಕ ವಿಷಯವಾದರೂ ಪ್ರಸಕ್ತವಾದ ಸನ್ನಿವೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಇಂತಹ ಹಲವಾರು ಶ್ವೇತಂದಿರು ಹೆತ್ತವರ ಪ್ರತಿಷ್ಟೆಗಳಿಗೋ ,ಶಾಲೆಗಳ ಪ್ರತಿಷ್ಟೆಗಳ ಹೆಸರಿನಲ್ಲಿ ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಮಗಳು ಕಲಿಕೆಯಲ್ಲಿ ಹಿಂದುಳಿದಿದ್ದಾಳೆ ಅಂತ ಗೊತ್ತಾದಾಗ ಗದರಿಸುವ ಬದಲು ಅವರಿಗೆ ಪ್ರೀತಿಯಿಂದ ಬುದ್ಧಿವಾದ ಹೇಳುವುದನ್ನು ಬಿಟ್ಟು, ಅವರನ್ನು ಇನ್ನಷ್ಟು ಸಂಕಷ್ಟದ ಸುಳಿಯೊಳಗೆ ಬಂಧಿಯಾಗಿಸಲು ಖಾಸಗಿ ಶಾಲೆಗಳಿಗೆ ಸೇರಿಸುವುದಲ್ಲ ಪರಿಹಾರ.ಡೊನೇಷನ್ ಹಾವಳಿಯಿಂದ ತತ್ತರಿಸುವ ಬಹುತೇಕ ಖಾಸಗಿ ಶಾಲೆಗಳಲ್ಲಿ ಶೇಕಡಾವಾರು ಫಲಿತಾಂಶ ಬರುವಂತಾಗಲು ಕೆಲವೊಮ್ಮೆ ವಿದ್ಯಾರ್ಥಿಗಳ ಜೀವನದಲ್ಲಿ ಮಾರಕವಾಗಿ ವರ್ತಿಸುವಂತಾಗಲು ಹೇಸದಂತಹ ಘಟನೆಗಳು ನಮಗೆ ಕಾಣಿಸಲು ಸಾಧ್ಯವಾಗುತ್ತದೆ.
ತಮ್ಮ ಪ್ರತಿಷ್ಠೆಗಳಿಗೆ ಮಕ್ಕಳ ಫಲಿತಾಂಶಗಳು ಮಾರಕವಾಗಬಾರದು ಅಂದುಕೊಂಡು ಮಕ್ಕಳನ್ನು ಶೋಷಣೆಗೊಳಪಡಿಸದಿರಿ.ಎಲ್ಲರ ಬುದ್ದಿಶಕ್ತಿಗಳು ಒಂದೇ ರೀತಿಯಾಗಿ ಕಾರ್ಯಾಚರಿಸಲ್ಲ ಅನ್ನುವ ವಾಸ್ತವ ಸತ್ಯವನ್ನು ಮರೆಯದಿರಿ.
ತಮ್ಮ ಪ್ರತಿಷ್ಟೆಗಳಿಗೋಸ್ಕರ ಮಕ್ಕಳ ಭವಿಷ್ಯಗಳನ್ನು ಬಲಿ ನೀಡುವ ಹೆತ್ತವರು ನಾವುಗಳಾಗದಿರೋಣ.

Comments