Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಸರ್ಪಸುತ್ತು ಏನಿದರ ಮರ್ಮ

ಡಾ|| ಮುರಲೀ ಮೋಹನ್ ಚೂಂತಾರು
Published on Thursday, April 14 2016
img

[ www.asiavisionnews.com ] ಸರ್ಪಸುತ್ತು ಎನ್ನುವ ರೋಗ ಹರ್ಪಿಸ್ ಎನ್ನುವ ವೈರಾಣುಗಳಿಂದ ಹರಡುತ್ತದೆ. ಈ ಹರ್ಪೀಸ್ ಪ್ರಭೇಧದ ವೈರಾಣುಗಳಲ್ಲಿ 130 ರೀತಿಯ ವಿಧವಿಧದ ವೈರಾಣುಗಳು ಇದೆ. ಇದರಲ್ಲಿ ಹೆಚ್ಚಾಗಿ ಮನುಷ್ಯರಿಗೆ ಭಾದಿಸುವ ವೈರಾಣುಗಳೆಂದರೆ ಹರ್ಪಿಸ್ ಸಿಂಪ್ಲೆಕ್ಸ್ 1 (HSV – I) ಹರ್ಪಿಸ್ ಸಿಂಪ್ಲೆಕ್ಸ್ 2 (HSV – II) ವಾರಿಸೆಲ್ಲಾ ಜೋಸ್ಟ್‍ರ್ (VZV) ಸೈಟೋಮೆಗಾಲೇ ವೈರಸ್ (CMV) ಏಬ್‍ಸ್ಟೆನ್ ಬಾರ್ ವೈರಸ್ (EBV)
ಮತ್ತು ಹ್ಯೂಮಸ್ ಪ್ಯಾಪಿಲೋಮ ವೈರಸ್ 6A, 6B, 7 ಮತ್ತು 8. ಇದರಲ್ಲಿ HSV I ಬಾಯಿ, ವಸಡು, ಗಂಟಲು ಮತ್ತು ಸೊಂಟದ ಮೇಲ್ಭಾಗದಲ್ಲಿ ಹುಣ್ಣುಗಳಿಗೆ ಕಾರಣವಾಗುತ್ತದೆ. ಮತ್ತು HSV II ಸೊಂಟದ ಕೆಳಭಾಗದಲ್ಲಿ ಜನನೇಂದ್ರಿಯಗಳ ಸುತ್ತಮುತ್ತ ಹುಣ್ಣುಗಳಿಗೆ ಕಾರಣವಾಗುತ್ತದೆ. ವಾರಿಸೆಲ್ಲಾ ಜೋಸ್ಟ್‍ರ್ ವೈರಸ್ (VZV) ಚಿಕನ್ ಪಾಕ್ಸ್ ಮತ್ತು ಸರ್ಪಸುತ್ತು ಎಂಬ ರೋಗಕ್ಕೆ ಕಾರಣವಾಗುತ್ತದೆ. ಮೊದಲ ಬಾರಿ ಈ ವೈರಾಣು ವ್ಯಕ್ತಿಗೆ ಸಂರ್ಪಕಕ್ಕೆ ಬಂದು ಸೋಂಕು ತಗಲಿದಾಗ ಚಿಕನ್ ಪಾಕ್ಸ್ ಎಂಬುದಾಗಿ ಕರೆಯುತ್ತಾರೆ. ರೋಗಿ ಗುಣಮುಖವಾದ ಬಳಿಕ ಈ ವೈರಾಣು ನರಗಳಲ್ಲಿ ನಿಷ್ಕ್ರಿಯವಾಗಿರುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ವೈರಾಣು ಪುನಃ ವ್ಯಕ್ತಿಯನ್ನು ಕಾಡಿ, ದೇಹದಲ್ಲಿ ಎರಡನೆ ಬಾರಿ ಪ್ರಕಟಗೊಂಡಾಗ ಅದನ್ನು ಶಿಂಗ್ಲೇಸ್ ಅಥವಾ ಜೋಸ್ಟ್‍ರ್ ಅಥವಾ ಜೋನಾ ಅಥವಾ ಸರ್ಪಸುತ್ತು ಎಂದು ಕರೆಯುತ್ತಾರೆ. ಜೋಸ್ಟ್‍ರ್ ಎಂಬುವುದು ಗ್ರೀಕ್ ಮೂಲದ ಶಬ್ದವಾಗಿದ್ದು, ಇದು ಒಂದು ಬಗೆಯ ತೊಡುಗೆಯಾಗಿದ್ದು, ಜೋಸ್ಟ್‍ರ್ ಪದಕ್ಕೆ ವಸ್ತ್ರದ ವಿನ್ಯಾಸ ಎಂಬ ಅರ್ಥವಿದೆ. ರೋಗದ ಚಿಹ್ನೆಗಳು ಮತ್ತು ರೋಗ ಪ್ರಕಟವಾಗುವ ರೂಪ, ದೇಹಕ್ಕೆ ಬಟ್ಟೆ ತೊಡಿಸಿದ ರೀತಿಯಲ್ಲಿ ಕಾಣಿಸುವುದರಿಂದ ಈ ಹೆಸರು ಬಂದಿರಲೂಬಹುದು.
ಚಿಕನ್ ಪಾಕ್ಸ್ ಎಂದರೇನು? :
[ www.asiavisionnews.com ]ವಾರಿಸೆಲ್ಲಾ ಜೋಸ್ಟ್‍ರ್ ವೈರಾಣುವಿನಿಂದ, ಹರಡುವ, ತೀವ್ರ ತರದ ಸಾಂಕ್ರಾಮಿಕವಾದ ರೋಗವಾಗಿದ್ದು, ಶೇಕಡಾ 90ರಷ್ಟು ಮಕ್ಕಳಲ್ಲಿಯೇ ಕಾಣಿಸಿಕೊಳ್ಳುತ್ತವೆ. ರೋಗ ಪೀಡಿತ ವ್ಯಕ್ತಿ ಜ್ವರ, ಮೈಕೈ ನೋವುಗಳಿಂದ ಆರಂಭಗೊಂಡು, ದೇಹದೆಲ್ಲೆಡೆ ನೀರು ಗುಳ್ಳೆಗಳು ಚರ್ಮದಲ್ಲಿ ಕಾಣಿಸಿಕೊಳ್ಳಬಹುದು. ಇದರ ತೀವ್ರತೆ, ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳಬಹುದು. ರೋಗದ ಕಿಟಕಿ ಅವಧಿ ಸುಮಾರು 10ರಿಂದ 21 ದಿನಗಳಾಗಿರುತ್ತದೆ. ಜ್ವರ, ನಿರಾಸಕ್ತಿ, ಜೊತೆಗೆ ತಲೆನೋವು, ಹೊಟ್ಟೆನೋವು, ಸ್ನಾಯುನೋವು ಇರಬಹುದು. ಇದು 24 ರಿಂದ 48 ಗಂಟೆಗಳಲ್ಲಿ ರೋಗಿಯ ಮೈಮೇಲೆ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಇದಾದ ಬಳಿಕ ರೋಗಿಗೆ ಹಸಿವಿಲ್ಲದಿರುವುದು, ತುರಿಕೆ, ವಿಪರೀತ ಸಂಕಟ ಉಂಟಾಗುವ ಸಾಧ್ಯತೆ ಇದೆ. ಕ್ರಮೇಣ ದೇಹದೆಲ್ಲೆಡೆ ಈ ಗುಳ್ಳೆಗಳು ವಿಸ್ತರಿಸಿ ದೇಹದ ಮೂಲೆ ಮೂಲೆಗೂ ಹರಡುತ್ತದೆ. ಕ್ರಮೇಣ ಈ ಗುಳ್ಳೆಗಳು ಒಡೆಯುವ ಸಮಯದಲ್ಲಿ ರೋಗ, ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಸರ್ಪಸುತ್ತು ಎಂದರೇನು? :
ಚಿಕನ್ ಪಾಕ್ಸ್ ರೋಗ ಬಂದ ನಂತರ ಮೊದಲನೇ ಹಂತದ ಸೋಂಕು ಕಡಮೆಯಾದ ಬಳಿಕ ರೋಗಿ ಗುಣಮುಖವಾಗುತ್ತಾನೆ. ವೈರಾಣುಗಳು ನರಗಳ ಮುಖಾಂತರ ಬೆನ್ನುಹುರಿಯ ನರ ಮಂಡಲದಲ್ಲಿ ಸುಪಾವಸ್ಥೆಯಲ್ಲಿ ಬದುಕುತ್ತಿರುತ್ತದೆ. ಸೋಂಕಿತ ವ್ಯಕ್ತಿಯ ದೇಹದ ರೋಗ ನಿರೋಧಕ ಶಕ್ತಿ ಕಡಮೆಯಾದಾಗ ಪುನಃ ವ್ಯಕ್ತಿಯನ್ನು ಕಾಡುತ್ತದೆ. ಈ ಜೋಸ್ಟ್‍ರ್ ಅಥವಾ ಸರ್ಪಸುತ್ತು ರೋಗ ಸಾಮಾನ್ಯವಾಗಿ ಹಿರಿಯ ನಾಗರೀಕರಲ್ಲಿ ವೃದ್ಯಾಪ್ಯದಲ್ಲಿ ಕಾಣಿಸುತ್ತದೆ. ರೋಗ ನಿರೋಧಕ ಶಕ್ತಿ ಕಡಮೆ ಇರುವ ಮಧುಮೇಹ ರೋಗಿಗಳಲ್ಲಿ, ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುವ ವ್ಯಕ್ತಿಗಳಲ್ಲಿ, ಮತ್ತು ನಿರಂತರವಾಗಿ ಸ್ಥಿರಾಯ್ಡು ಸೇವನೆ ಮಾಡುವ ವ್ಯಕ್ತಿಗಳಲ್ಲಿ, ಹೆಚ್‍ಐವಿ ಪೀಡಿತರಲ್ಲಿ, ಈ ಸರ್ಪಸುತ್ತು ರೋಗ ಹೆಚ್ಚಾಗಿ ಪ್ರಕಟಗೊಳ್ಳುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಸಂದರ್ಭಗಳಲ್ಲಿ ಸರ್ಪಸುತ್ತು ರೋಗ ಹಿರಿಯ ನಾಗರೀಕರಲ್ಲಿ ಕಂಡುಬರುತ್ತದೆ. ಮಕ್ಕಳಲ್ಲಿ ಈ ರೋಗ ಬಹಳ ಅಪರೂಪ. ಆದರೆ ಚಿಕನ್ ಪಾಕ್ಸ್ (ಸಿಡುಬು)ರೋಗ ಶೇಕಡಾ 90ರಷ್ಟು ಮಕ್ಕಳಲ್ಲಿಯೇ ಕಂಡು ಬರುತ್ತದೆ. ಒಟ್ಟಿನಲ್ಲಿ ಈ ಸರ್ಪಸುತ್ತು ಅಥವಾ ಹರ್ಪಿಸ್ ಜೋಸ್ಟ್‍ರ್ ರೋಗ ಬರುವುದರ ಮೊದಲು ಆ ವ್ಯಕ್ತಿ ವಾರಿಸೆಲ್ಲಾ ಜೋಸ್ಟ್‍ರ್ ಎಂಬ ವೈರಾಣುವಿನಿಂದ ಪೀಡಿತವಾಗಿ, ಚಿಕನ್ ಪಾಕ್ಸ್ ರೋಗದಿಮದ ಬಳಲಿದ್ದಲ್ಲಿ ಮಾತ್ರ, ಈ ಸರ್ಪಸುತ್ತು ಕಾಯಿಲೆ ಬರುವ ಸಾಧ್ಯತೆ ಇರುತ್ತದೆ.
ಹರ್ಪಿಸ್ ಎನ್ನುವ ಈ ಪ್ರಬೇಧದ ವೈರಾಣುವಿನ ಮೂಲ ಶಬ್ದ ಗ್ರೀಕ್‍ನ ಹರ್ಪೈನ್ (to creep) ಎಂದರೆ [ www.asiavisionnews.com ]ಪದೇ ಪದೇ ಬರುವ ಈ ವೈರಲ್ ಸೋಂಕುನಿಂದಾಗಿ ಹರ್ಪಿಸ್ ಎಂಬ ಹೆಸರು ಬಂದಿದೆ. ಜೋಸ್ಟ್‍ರ್ ಎಂದರೆ ಬೆಲ್ಟ್ ಅಥವಾ ಕುತ್ತಿಗೆ ಪಟ್ಟಿ (girdle) ಎಂದರ್ಥ ಗ್ರೀಕ್‍ನಲ್ಲಿದೆ. ಚರ್ಮದಲ್ಲಿನ ನೀರು ಗುಳ್ಳೆಗಳು ಬೆಲ್ಟ್‍ನ ರೀತಿಯಲ್ಲಿ ಸೊಂಟದ ಸುತ್ತ ಮತ್ತು ಕುತ್ತಿಗೆ ಪಟ್ಟಿಯಂತೆ ಕೊರಳಿನ ಸುತ್ತ ಹರಡುವುದರಿಂದ, ಜೋಸ್ಟ್‍ರ್ ಎಂಬ ಹೆಸರು ಬಂದಿರುವ ಸಾಧ್ಯತೆ ಇದೆ. ಅದೇ ರೀತಿ ಶಿಂಗ್ಲೇಸ್ (Shingles) ಎಂಬ ಪದ ಲ್ಯಾಟಿನ್ ಮೂಲದ ಸಿಂಗುಲಸ್ ಎಂಬ ಪದದಿಂದ ಬಂದಿದ್ದು, ಈ ಪದಕ್ಕೆ girdle ಎಂಬ ಅರ್ಥವಿರುವುದರಿಂದ ಶಿಂಗ್ಲೇಸ್ ಎಂಬ ಹೆಸರು ಬಂದಿದೆ.
ಯಾಕಾಗಿ ಸರ್ಪಸುತ್ತು ರೋಗ ಬರುತ್ತದೆ ಎಂದು ನಿಖರವಾಗಿ ಗುರುತಿಸಲಾಗದಿದ್ದರೂ, ವ್ಯಕ್ತಿಯು ವಿಪರೀತವಾದ ಮಾನಸಿಕ ಒತ್ತಡ, ಕೆಲಸದ ಒತ್ತಡ, ರಸದೂತಗಳ ವೈಪರೀತ್ಯ, ಅಘಪಾತನಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕುಂಠಿತವಾದಾಗ, ಅಸ್ಪಿಮಜ್ಜೆ, ಕಸಿ ಅಥವಾ ಕಿಡ್ನಿ ಕಸಿ ಅಥವಾ ಇನ್ನಾವುದೇ ಬೃಹತ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ದೇಹದ ರೋಗ ನಿರೋಧಕ ಶಕ್ತಿ ಕುಗ್ಗಿದಾಗ, ಕ್ಷಕಿರಣ ಚಿಕಿತ್ಸೆಯ ಸಂದರ್ಭದಲ್ಲಿ, ಕ್ಯಾನ್ಸರ್ ನಂತಹ ಮಾರಕ ರೋಗದಿಂದ ಬಳಲಿ ರೋಗ ನಿರೋಧಕ ಶಕ್ತಿ ಕಡಮೆಯಾದಾಗ ಮತ್ತು ಹೆಚ್‍ಐವಿ ಬಾಧಿತರಾಗಿ ಏಡ್ಸ್ ರೋಗದಿಂದ ಬಳಲುತ್ತಿದ್ದಲ್ಲಿ ಈ ಸರ್ಪಸುತ್ತು ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸುಮಾರು 30 ಶೇಕಡಾದಷ್ಟು ಏಡ್ಸ್ ರೋಗಿಗಳು ಈ ಸರ್ಪಸುತ್ತು ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.
ಸಾಮಾನ್ಯವಾಗಿ ಹೂಗುಚ್ಚಗಳಂತೆ ಗುಂಪುಗುಂಪಾಗಿ ಗುಳ್ಳೆಗಳು ಸೊಂಟದ ಸುತ್ತ, ಎದೆಯ ಸುತ್ತ, ಕುತ್ತಿಗೆಯ ಸುತ್ತ ಕಾಣಿಸಿಕೊಂಡು ದೇಹವನ್ನು ಬೆಲ್ಟ್‍ನಂತೆ ಸುತ್ತುವರಿಯುತ್ತದೆ (ಒಂದು ಬದಿ ಅಥವಾ ಪಾಶ್ರ್ವ ಮಾತ್ರ) ಈ ಕಾರಣದಿಂದಲೇ ಈ ರೋಗಕ್ಕೆ ಸರ್ಪಸುತ್ತು ಎಂಬ ಹೆಸರು ಬಂದಿರುವ ಸಾಧ್ಯತೆ ಇದೆ. ಒತ್ತೊತ್ತಾಗಿರುವ ಸಣ್ಣ ಸಣ್ಣ ನೀರು ಗುಳ್ಳೆಗಳು ಪಟ್ಟೆಯಾಕಾರದಲ್ಲಿ ದೇಹದಲ್ಲಿ ಬೆನ್ನುಮೂಳೆಯ ಒಂದು ಪಾಶ್ರ್ವದಿಂದ ಹೊಟ್ಟೆ, ಎದೆಯಲ್ಲಿ ಮೂಡುತ್ತದೆ, ಇದನ್ನು ಜನ ಸಾಮಾನ್ಯರು ಸರ್ಪದ ಚರ್ಮ ಅಥವಾ ಹೆಡೆಯ ರೂಪವನ್ನು ಕಲ್ಪಿಸಿಕೊಂಡು, ಸರ್ಪ ದೋಷದಿಂದ ಬಂದಿರುವ ರೋಗ ಎಂದು ಊಹಿಸಿಕೊಂಡು, ಸರ್ಪದ ಬಗ್ಗೆ ಇರುವ ಧಾರ್ಮಿಕ ನಂಬಿಕೆ ಮತ್ತು ಸಹಜವಾದ ಭಯ ಹಾಗೂ ದೇವತಾರೂಪಿ ನಂಬಿಕೆಯಿಂದ ನಾಗದೇವ ಮುನಿದ ಎಂದು ಪರಿಗಣಿಸಿ ರೋಗ ಗುಣಪಡಿಸಲು ನಾಗದೋಷ ನಿವಾರಣೆಗಾಗಿ ಅವೈಜ್ಞಾನಿಕ ಚಿಕಿತ್ಸಾ ಪದ್ಧತಿಗಳನ್ನು ಬಳಸುತ್ತಾರೆ. ಈ ರೀತಿಯ ಅಪನಂಬಿಕೆ, ಮೂಡನಂಬಿಕೆ ಮತ್ತು ತಪ್ಪುಕಲ್ಪನೆಗಳಿಂದ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹೋಗಿ ರೋಗ ಉಲ್ಬಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅರೇಬಿಕ್ ಭಾಷೆಯಲ್ಲಿ ವಿಪರೀತ ಉರಿತವಿರುವುದರಿಂದ ಬೆಂಕಿಯ ಬೆಲ್ಟ್ (Belt of Fire) ಎಂದೂ, ಸ್ಪಾನಿಷ್ ಭಾಷೆಯಲ್ಲಿ, ಸಣ್ಣ ಹಾವು (Small Snake) ಎಂದೂ ಈ ರೋಗವನ್ನು ಕರೆಯಲಾಗುತ್ತದೆ. ಸಾಮಾನ್ಯವಾಗಿ ರೋಗದ ಪ್ರಾಥಮಿಕ ಲಕ್ಷಣಗಳನ್ನು ಅಭ್ಯಸಿಸಿ, ವೈದ್ಯರು ರೋಗದ ನಿರ್ಣಯಕ್ಕೆ ಬರುತ್ತಾರೆ. ರೋಗ ತಗುಲಿರುವ ಅಂಗಾಂಗದಿಂದ, ದ್ರವವನ್ನು ತೆಗೆದು ಪ್ರಯೋಗಾಲಯದಲ್ಲಿ ವೈರಾಣುವಿನ ಇರುವಿಕೆಯನ್ನು ದೃಢಪಡಿಸಲಾಗುತ್ತದೆ. ಅದೇ ರೀತಿ ಹರ್ಪಿಸ್ ಖಾಯಿಲೆ ಬಂದವರು (ಒಂದಕ್ಕಿಂತ ಹೆಚ್ಚು ಬಾರಿ) ಅವರ ದೇಹದ ದ್ರವಗಳಲ್ಲಿ, ಜೀವರಸಗಳಲ್ಲಿ ಹರ್ಪಿಸ್ ವೈರಾಣುವಿನ ವಿರುದ್ಧದ ಆಂಟಿಬಾಡಿಗಳನ್ನು (ವಿರುದ್ಧ ಕಣಗಳು) ಪ್ರಯೋಗಾಲಯದಲ್ಲಿ ಪತ್ತೆಹಚ್ಚಿ ರೋಗವನ್ನು ಗುರುತಿಸಲಾಗುತ್ತದೆ.
ಹೇಗೆ ಹರಡುತ್ತದೆ?:
[ www.asiavisionnews.com ] ಈ ವೈರಾಣು ರೋಗಿಯಿಂದ ರೋಗಿಗೆ ಸ್ಪರ್ಶದ ಮುಖಾಂತರ ಹರಡಬಹುದು. ಗುಳ್ಳೆಗಳಿಂದ ಬರುವ ದ್ರವಗಳಿಂದ ಮತ್ತು ಉಸಿರಾಟದ ಗಾಳಿಯಿಂದ ಹರಡುವ ಸಾಧ್ಯತೆ ಇರುತ್ತದೆ.
ರೋಗವನ್ನು ಗುರುತಿಸುವುದು ಹೇಗೆ ಮತ್ತು ರೋಗದ ಲಕ್ಷಣಗಳು:
ಈ ರೋಗ ಸಮಾರು 3 ಹಂತಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗಬಹುದು. ಮೊದಲ ಹಂತದಲ್ಲಿ ವಿಪರೀತ ಸುಸ್ತು, ಜ್ವರ, ವಿಪರೀತ ಚರ್ಮ ಉರಿತ ಮತ್ತು ಕೆರೆತ ಹಾಗೂ ನೋವು ಇರಬಹುದು. ಸ್ಪರ್ಶಜ್ಞಾನ ಇಲ್ಲದೆ ಇರಬಹುದು. ಈ ಮೊದಲ ಹಂತದ ಲಕ್ಷಣಗಳು ಕಾಣಿಸಿದ 3 ರಿಂದ 4 ದಿನಗಳ ಬಳಿಕ ಚರ್ಮದಲ್ಲಿ ಲಕ್ಷಣಗಳು ಗೋಚರಿಸುತ್ತವೆ. ಎರಡನೇ ಹಂತದಲ್ಲಿ ಕೆಂಪಗಿನ ದೊಡ್ಡ ಗಾತ್ರದ ಕಲೆಗಳು ಚರ್ಮದಲ್ಲಿ ಕಾಣಿಸಿಕೊಳ್ಳಬಹುದು. ಈ ಕಲೆಗಳು ದೊಡ್ಡದಾದ ಗುಳ್ಳೆಗಳಾಗಿ ಪರಿವರ್ತಿತವಾಗಿ, ನೀರಿನಿಂದ ತುಂಬಿಕೊಂಡು ಚಿಕನ್ ಪಾಕ್ಸ್‍ನ ರೀತಿಯಲ್ಲಿಯೇ ಕಾಣಿಸಿಕೊಳ್ಳುತ್ತದೆ. ದೇಹದ ಒಂದು ಬದಿಯಲ್ಲಿ (ಬಲಭಾಗ ಅಥವಾ ಎಡಭಾಗ) ಮಾತ್ರ ಈ ರೀತಿಯಾಗಿ ಗುಂಪುಗುಂಪಾಗಿ, ಹೂಗುಚ್ಚಗಳ ರೀತಿಯಲ್ಲಿ ಗುಳ್ಳೆಗಳು ಕಾಣಿಸಿಕೊಂಡು ಅವುಗಳ ಸುತ್ತ ಕೆಂಪಾದ ಮಚ್ಚೆಗಳು ಇರಬಹುದು. ಕ್ರಮೇಣ ಈ ಗುಳ್ಳೆಗಳು ಒಟ್ಟಾಗಿ ಸೇರಿಕೊಂಡು ದೊಡ್ಡದಾದ ಗುಳ್ಳೆಗಳಾಗಿ ಪರಿವರ್ತಿತವಾಗಿ ಕ್ರಮೇಣ ಒಡೆದು ಒಣಗಲು ಪ್ರಾರಂಭಿಸುತ್ತದೆ. ಸುಮಾರು ಎರಡು ವಾರಗಳಲ್ಲಿ ಈ ಒಣಗಿದ ಗುಳ್ಳೆಗಳಿಂದ ಚರ್ಮ ಕಳಚಿಕೊಳ್ಳಲು ತೊಡಗುತ್ತದೆ. ಇದಾದ 4 ರಿಂದ 6 ವಾರಗಳಲ್ಲಿ ಸಂಪೂರ್ಣವಾಗಿ ಗಾಯ ಒಣಗಿ, ಮೊದಲಿನಂತೆ ಚರ್ಮ ಕಾಣಿಸುತ್ತದೆ. ಆದರೆ ಈ 4 ವಾರ ವಿಪರೀತ ನೋವು ಮತ್ತು ಯಾತನೆ ಇರುತ್ತದೆ. ಈ ನೋವು ಮತ್ತು ಯಾತನೆ, ಆ ನರದ ಪರಿಧಿಯೊಳಗೆ ಮಾತ್ರ ಇರುತ್ತದೆ ಮತ್ತು ದೇಹದ ಒಂದು ಬದಿಯಲ್ಲಿ ಮಾತ್ರ ಕಾಣಸಿಗುತ್ತದೆ. ದೇಹದ ಎರಡೂ ಬದಿಯಲ್ಲಿ ಕಾಣಸಿಗುವ ಸಾಧ್ಯತೆ ಬಹಳ ಕಡಿಮೆಯಾಗಿರುತ್ತದೆ. ಈ ನೋವು ಮಾತ್ರ ನಿರಂತರವಾಗಿದ್ದು, ವಿಪರೀತ ಉರಿತ ಮತ್ತು ಕೆರೆತ ಇರುತ್ತದೆ. ಮೂರನೇ ಹಂತದಲ್ಲಿ ಈ ನೋವು, ಕ್ರಮೇಣ ತೀವ್ರತೆಯನ್ನು ಕಳೆದುಕೊಂಡು, ನಿರಂತರವಾದ ಅಲ್ಪ ಪ್ರಮಾಣದ ನೋವು, ನರದ ವ್ಯಾಪ್ತಿಯ ಕ್ಷೇತ್ರದಲ್ಲಿ ಕಂಡುಬರುತ್ತದೆ. ಈ ನಿರಂತರವಾದ ನೋವು ವ್ಯಕ್ತಿಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಪಡಿಸಿ, ಮಾನಸಿಕ ಮತ್ತು ದೈಹಿಕ ಯಾತನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನಿದ್ರಾಹೀನತೆ, ಹಸಿವಿಲ್ಲದಿರುವುದು, ಮುಂತಾದವು ಉಂಟಾಗಿ ಇನ್ನಾವುದೇ ರೋಗಕ್ಕೆ ಕಾರಣವಾಗಲೂ ಬಹುದು.
ಲಸಿಕೆ ಇದೆಯೇ? :
ಈ ರೋಗಕ್ಕೆ ಲಸಿಕೆ ಲಭ್ಯವಿದ್ದು, ಅಮೇರಿಕಾ ದೇಶದಲ್ಲಿ 60 ವರ್ಷ ಕಳೆದ ಎಲ್ಲರಿಗೂ ಈ ಲಸಿಕೆ ಹಾಕಲಾಗುತ್ತದೆ. ಈ ಲಸಿಕೆ ತುಂಬಾ ಪರಿಣಾಮಕಾರಿಯಾಗಿದ್ದು 60ರಿಂದ 70 ವರ್ಷದ ವ್ಯಕ್ತಿಗಳಲ್ಲಿ ತುಂಬ ಉಪಯುಕ್ತ. 80 ವರ್ಷ ಕಳೆದ ಬಳಿಕ ಈ ಲಸಿಕೆ ವಿಶೇಷವಾಗಿ ಉಪಯೋಗವಾಗಲಿಕ್ಕಿಲ್ಲ. ಜೋಸ್ಟ್‍ರ್ ಲಸಿಕೆ ಎಂಬ ಹೆಸರಿನಲ್ಲಿ ಈ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಚಿಕಿತ್ಸೆ ಹೇಗೆ? :
[ www.asiavisionnews.com ]ಸಾಮಾನ್ಯವಾಗಿ ರೋಗದ ಲಕ್ಷಣಗಳ ತೀವ್ರತೆಯನ್ನು ನೋಡಿಕೊಂಡು ಚಿಕಿತ್ಸೆಯನ್ನು ಮಾರ್ಪಾಡು ಮಾಡಲಾಗುತ್ತದೆ. ವೈರಾಣು ನಿರೋಧಕ ಮಾತ್ರೆಗಳಾದ ಏಸೈಕ್ಲೋವಿರ್ ಮಾತ್ರೆ, ಜ್ವರ ಕಡಮೆಯಾಗಿಸಲು ಮತ್ತು ನೋವು ನಿವಾರಣೆ ಮಾಡಲು ಪ್ಯಾರಾಸಿಟಮೋಲ್ ಮಾತ್ರೆ ಮತ್ತು ತುರಿಕೆ ಕಡಮೆಯಾಗಿಸಲು ಆಂಟಿ ಹಿಸ್ಟ್‍ಮಿನ್ ಮಾತ್ರೆಗಳನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳನ್ನು, ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಸುರಕ್ಷಿತ ಸಮತೋಲಿತ ಆಹಾರ, ಹೆಚ್ಚು ಹೆಚ್ಚು ದ್ರವಾಹಾರ ಸೇವನೆ ಮಾಡಿ, ದೇಹದ ರಕ್ಷಣಾ ವ್ಯವಸ್ಥೆ ಕುಸಿಯದ ರೀತಿಯಲ್ಲಿ ಉಪಚರಿಸಲಾಗುತ್ತದೆ. ಯಾವ ಕಾರಣದಿಂದಾಗಿ ದೇಹದ ರಕ್ಷಣಾ ವ್ಯವಸ್ಥೆ ಕುಸಿದು, ರೋಗ ನಿರೋಧಕ ಶಕ್ತಿ ಕಡಮೆಯಾಗಿದೆ ಎಂದು ಅರಿತುಕೊಂಡು ಅದಕ್ಕೆ ಬೇಕಾದ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅದೇ ರೀತಿ ದೇಹಕ್ಕೆ ಸೋಂಕು ತಗಲದಂತೆ ಆಂಟಿ ಬಯೋಟಿಕ್ ಔಷಧಿಯನ್ನು ನೀಡಲಾಗುತ್ತದೆ. ರೋಗದಿಂದ ಬಳಲಿದ ವ್ಯಕ್ತಿಗೆ ಸಾಂತ್ವನ ಹೇಳಿ, ಮಾನಸಿಕ ಧೈರ್ಯ ನೀಡಿ, ರೋಗದ ಬಗ್ಗೆ ವಿವರಣೆ ನೀಡಿ, ಮೂಡನಂಬಿಕೆ ಮತ್ತು ತಪ್ಪು ಕಲ್ಪನೆಗಳಿಗೆ ಒಳಗಾಗದಂತೆ ನೋಡಿಕೊಳ್ಳಲಾಗುತ್ತದೆ. ರೋಗಿಗೆ ಸಂಪೂರ್ಣ ವಿಶ್ರಾಂತಿ ನೀಡಿ ರೋಗದಿಂದ ಬೇಗನೆ ಗುಣಮುಖವಾಗುವಂತೆ ಪೂರಕವಾದ ವಾತಾವರಣ ನಿರ್ಮಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಖಾಯಿಲೆಯನ್ನು ನಿಯಂತ್ರಿಸುವ ಮತ್ತು ಹತೋಟಿಯಲ್ಲಿಡಲು, ಮಾರುಕಟ್ಟೆಯಲ್ಲಿ ಹಲವಾರು ರೀತಿಯ ವೈರಾಣು ವಿರೋಧಿ ಮಾತ್ರೆಗಳು ಲಭ್ಯವಿದೆ. ಏಸೈಕ್ಲೋವಿರ್ ಸಾಮಾನ್ಯವಾಗಿ ಹೆಚ್ಚಾಗಿ ಬಳಸಲ್ಪಡುವ ಔಷಧಿಯಾಗಿರುತ್ತದೆ. ವೈದ್ಯರ ಸಲಹೆ ಮತ್ತು ಚೀಟಿ ಇಲ್ಲದೆ ಈ ಔಷಧಿ ದೊರಕುವುದಿಲ್ಲ. ಹರ್ಪಿಸ್ ರೋಗಕ್ಕೆ ಶಾಶ್ವತ ಪರಿಹಾರವಿಲ್ಲದಿದ್ದರೂ, ರೋಗದ ತೀವ್ರತೆಯನ್ನು ತಡೆಯಾಗಿಸುವ ನಿಟ್ಟಿನಲ್ಲಿ ಈ ಔಷಧಿಗಳು ಹೆಚ್ಚಿನ ಉಪಯೋಗಕ್ಕೆ ಬರುತ್ತದೆ. ಈ ವೈರಾಣು ವಿರೋಧಿ ಮಾತ್ರೆಗಳು ಅಥವಾ ಚುಚ್ಚು ಮದ್ದುಗಳು ವೈರಾಣುಗಳು ವೃದ್ಧಿಯಾಗಿರುವುದನ್ನು ತಡೆಗಟ್ಟುತ್ತದೆ ಮತ್ತು ಖಾಯಿಲೆಯನ್ನು ನಿಯಂತ್ರಿಸುತ್ತದೆ ಮತ್ತು ಖಾಯಿಲೆ ಹರಡದಂತೆ ತಡೆಯುತ್ತದೆ. ಇದರ ಜೊತೆಗೆ ಹುಣ್ಣಿಗೆ ಹಚ್ಚಲು ಕಾಲಾಮೈನ್ ಮುಲಾಮುಗಳು ಅಥವಾ ಔಷಧಿಗಳು ದೊರಕುತ್ತದೆ. ಈ ಕ್ರೀಂಗಳಿಂದ ಸೋಂಕು ತಗಲದಂತೆ ರಕ್ಷಣೆ ದೊರಕುತ್ತದೆ. ಒಟ್ಟಿನಲ್ಲಿ ಸಕಾಲದಲ್ಲಿ ಸೂಕ್ತ ವೈದ್ಯರ ಸಲಹೆ ಮಾರ್ಗದರ್ಶನ ದೊರೆತಲ್ಲಿ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.

ತಡೆಗಟ್ಟುವುದು ಹೇಗೆ?
ಸರ್ಪಸುತ್ತು ರೋಗದಿಂದ ಬಳಲುತ್ತಿರುವವರು ರೋಗ ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು.
1. ಸೋಂಕಿರುವ ಜಾಗವನ್ನು ಮುಟ್ಟಿದ ನಂತರ, ಸೋಪಿನ ದ್ರಾವಣ ಬಳಸಿ ಕೈ ತೊಳೆಯಬೇಕು.
2. ಸೋಂಕು ದೇಹದ ಬೇರೆ ಬೇರೆ ಭಾಗಕ್ಕೆ ಮತ್ತು ಬೇರೆ ಜನರಿಗೆ ಹರಡದಂತೆ ನೋಡಿಕೊಳ್ಳಬೇಕು.
3. ಹರ್ಪಿಸ್ ರೋಗವುಳ್ಳವವರು ಸಂಪೂರ್ಣ ಗುಣಮುಖವಾಗುವವರೆಗೂ ಲೈಂಗಿಕ ಕ್ರಿಯೆಯನ್ನು ಮಾಡಬಾರದು.
4. ಸಾಕಷ್ಟು ವಿಶ್ರಾಂತಿ, ನಿದ್ದೆ, ದ್ರವಾಹಾರ ಮತ್ತು ಪೌಷ್ಠಿಕ ಆಹಾರ ಸೇವಿಸಬೇಕು.
5. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಸಿ ತರಕಾರಿ, ಹಣ್ನು, ಹಂಪಲು ಸೇವಿಸಬೆಕು.
6. ಗಾಯಗಳನ್ನು ರಕ್ಷಿಸುವ ಕ್ರೀಂಗಳನ್ನು ಮತ್ತು ಸೋಂಕು ಆಗದಂತೆ ತಡೆಯುವ ದ್ರಾವಣಗಳನ್ನು ಬಳಸಬೇಕು.
7. ಆರಂಭಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿ ವೈದ್ಯರ ಸಲಹೆ ಪಡೆದಲ್ಲಿ ರೋಗದ ತೀವ್ರತೆಯನ್ನು ಹತ್ತಿಕ್ಕಬಹುದು.
8. ರೋಗ ಶಂಕಿತ ವ್ಯಕ್ತಿ ಬಳಸಿದ ತಟ್ಟೆ, ಕರವಸ್ತ್ರ, ಬಟ್ಟೆ ಮುಂತಾದವುಗಳನ್ನು ಬಳಸಬಾರದು. ಸಾಮಾನ್ಯವಾಗಿ ಈ ರೋಗಿಗಳನ್ನು ಏಕಾಂತದಲ್ಲಿ ಇರಿಸಿ, ಇತರರಿಗೆ ರೋಗ ಹರಡದಂತೆ ನೋಡಿಕೊಳ್ಳಲಾಗುತ್ತದೆ.
ಕೊನೆ ಮಾತು
[ www.asiavisionnews.com ]ಸರ್ಪಸುತ್ತು ಎನ್ನುವುದು ಭಯಾನಕ ಖಾಯಿಲೆ ಅಲ್ಲ. ಸರ್ಪಸುತ್ತು ರೋಗಕ್ಕೆ ನಾಗದೇವನ ಮುನಿಸು ಮತ್ತು ದೈವ ದೋಷ ಖಂಡಿತಾ ಕಾರಣವಲ್ಲ. ಚಿಕ್ಸಿತೆಯಿಂದ ಪೂರ್ತಿಯಾಗಿ ಗುಣಪಡಿಸಬಹುದಾದ ಖಾಯಿಲೆಯಂತೂ ಹೌದು. ರೋಗದ ಚಿಕ್ಸಿತೆಗಿಂತ ರೋಗವನ್ನು ತಡೆಗಟ್ಟುವುದು ಯಾವತ್ತೂ ಒಳ್ಳೆಯದು. ಹಾಗೆಂದ ಮಾತ್ರಕ್ಕೆ ರೋಗ ಬಂದ ಬಳಿಕ ಯಾವುದೇ ರೀತಿಯ ಮುಚ್ಚುಮರೆ ಒಳ್ಳೆಯದಲ್ಲ. ನಿಮ್ಮ ಸಮಸ್ಯೆಗಳನ್ನು ವೈದ್ಯರ ಬಳಿ ಹಂಚಿಕೊಳ್ಳಿ. ನಿಮ್ಮ ಎಲ್ಲಾ ಗೊಂದಲ, ನೋವು, ಮತ್ತು ಸಮಸ್ಯೆಗಳನ್ನು ವೈದ್ಯರಲ್ಲಿ ಯಾವುದೇ ಸಂಕೋಚವಿಲ್ಲದೆ ತಿಳಿಸಿದಲ್ಲಿ, ರೋಗವನ್ನು ಸಕಾಲದಲ್ಲಿ ಪತ್ತೆ ಹಚ್ಚಿ, ಸೂಕ್ತವಾಗಿ ಚಿಕ್ಸಿತೆ ನೀಡುವಲ್ಲಿ ವೈದ್ಯರಿಗೆ ಅನುಕೂಲವಾಗಬಹುದು. ಆರೋಗ್ಯ ಪೂರ್ಣ ಸಮಾಜದ ನಿರ್ಮಾಣವಾಗಬೇಕಾದಲ್ಲಿ ಈ ರೀತಿಯ ರೋಗಗಳನ್ನು ಹತೋಟಿಯಲ್ಲಿಡಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯು ತನ್ನ ಹೊಣೆಗಾರಿಕೆ ಅರಿತು ನಿಭಾಯಿಸಿದ್ದಲ್ಲಿ ಸುಂದರ ಮತ್ತು ಸುದೃಢ ಸಮಾಜದ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ. ಅದರಲ್ಲಿಯೇ ದೇಶದ ಮತ್ತು ವಿಶ್ವದ ಭವಿಷ್ಯ ಅಡಗಿದೆ.

Comments