ಎಂ.ಜಿ.ರಸ್ತೆ ಲೈಂಗಿಕ ದೌರ್ಜನ್ಯ ಪ್ರಕರಣ: ಮಾಧ್ಯಮಗಳ ಸಹಾಯ ಕೋರಿದ ಪೊಲೀಸ್ ಆಯುಕ್ತ: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ: ಪ್ಪವೀಣ್ ಸೂದ್

Friday, January 06 2017
img

ಬೆಂಗಳೂರು(www.asiavisionnews.com) : ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯ ಆಧಾರದ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ನಂತರ ನಮ್ಮ ತಂಡಗಳು ತನಿಖೆ ಆರಂಭಿಸಿವೆ. ನಾವು ಸೂಕ್ತ ಸಾಕ್ಷ್ಯಾಧಾರಕ್ಕಾಗಿ ಶೋಧ ನಡೆಸುತ್ತಿದ್ದೇವೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಾಹಿತಿಗಳನ್ನು ಕಲೆಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ನಾನು ಅಧಿಕಾರ ಸ್ವೀಕರಿಸಿದ ಮೊದಲ ದಿನ ಹೇಳಿದಂತೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ ಎಂದು ಪುನರುಚ್ಚರಿಸಿದರು. ಡಿಸೆಂಬರ್ 31 ರಂದು ನಾನು ನಗರ ಪೊಲೀಸ್ ಆಯುಕ್ತನಾಗಿರಲಿಲ್ಲ, ನಾನು ಜನವರಿ 1 ರಂದು ಅಧಿಕಾರ ಸ್ವೀಕರಿಸಿದೆ. ಅಂದು ನಾನು ಮಾಧ್ಯಮ ಪ್ರತಿನಿಧಿಗಳನ್ನ ಭೇಟಿಯಾಗಿದ್ದೆ, ಆದರೆ ಈ ಪ್ರಕರಣ ಸಂಬಂಧ ಅಂದು ಯಾರರು ನನ್ನ ಬಳಿ ಯಾವುದೇ ವಿಷಯ ಚರ್ಚಿಸಿಲ್ಲ, ಜನವರಿ 2 ರಂದು ಮಾಹಿತಿ ಸ್ಫೋಟವಾಯಿತು. ಅದಾದ ನಂತರ ನಾವು ತಂಡಗಳನ್ನು ರಚಿಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ.

ಈ ಸಂಬಂಧ ಇಂದಿರಾನಗರದಲ್ಲಿ ಒಂದು, ಅಶೋಕ ನಗರದಲ್ಲಿ ಎರಡು ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಂದು ಸೇರಿದಂತೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿವೆ.

ಸುದ್ದಿ ಪ್ರಸಾರ ಮಾಡಿದ ಸುದ್ದಿ ಸಂಸ್ಥೆಗಳಿಗೆ ತಮ್ಮ ಬಳಿಯಿರುವ ಮಾಹಿತಿಯನ್ನು ನಮಗೆ ನೀಡುವಂತೆ ಕೋರಿ ನೋಟಿಸ್ ನೀಡಿದ್ದೇವೆ,ಈ ವರೆಗೂ ಪ್ರಕರಣ ಸಂಬಂಧ 20 ಮಂದಿಯನ್ನು ವಿಚಾರಣೆ ಮಾಡಲಾಗಿದೆ. ಆದರೆ ಇದುವರೆಗೂ ನಮಗೆ ಸೂಕ್ತ ಸಾಕ್ಷ್ಯಾಧಾರ ಸಿಕ್ಕಿಲ್ಲ, ಆದರೆ ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

Comments