Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮೋದಿ ಕಾರ್ಪೊರೇಟ್ ಕಂಪನಿಗಳ ಸೇಲ್ಸ್‌ಮನ್: ಅಭಿವೃದ್ಧಿ ಹೆಸರಿನಲ್ಲಿ ದೇಶ ಕೊಳ್ಳೆ ಹೊಡೆದ ಮಹಾನ್ ಕಳ್ಳ.ಸಂವಿಧಾನ ಉಳಿವಿಗಾಗಿ ಕರ್ನಾಟಕ’ ಆಂದೋಲನದಲ್ಲಿ ಶಾಸಕ ಜಿಗ್ನೇಶ್ ಮೇವಾನಿ ವ್ಯಂಗ್ಯ

Monday, April 30 2018
img

ಬೆಂಗಳೂರು((www.asiavisionnews.com): ‘ಪ್ರಧಾನಿ ನರೇಂದ್ರ ಮೋದಿ ದೊಡ್ಡ ನಟ ಸಾಮ್ರಾಟ್. ಕಾರ್ಪೊರೇಟ್ ಕಂಪನಿಗಳ ಸೇಲ್ಸ್‌ಮನ್. ಅಭಿವೃದ್ಧಿ ಹೆಸರಿನಲ್ಲಿ ದೇಶ ಕೊಳ್ಳೆ ಹೊಡೆದ ಮಹಾನ್ ಕಳ್ಳ... ಇಂಥ ಬಿರುದುಗಳುಳ್ಳ ವ್ಯಕ್ತಿಗೆ ದಕ್ಷಿಣ ಭಾರತವನ್ನು ಪ್ರವೇಶಿಸಲು ಅವಕಾಶ ನೀಡಬಾರದು’ ಎಂದು ಗುಜರಾತ್‌ನ ವಡಗಾಂವ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು.‌

ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಸಂವಿಧಾನ ಉಳಿವಿಗಾಗಿ ಕರ್ನಾಟಕ’‌ ಆಂದೋಲನದಲ್ಲಿ ಮಾತನಾಡಿದ ಅವರು, ‘2019ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್‌ನಂತಿರುವ ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಬೇಕು’ ಎಂದರು.

‘ಮೊದಲು ಗುಜರಾತನ್ನು ಕಾರ್ಪೊರೇಟ್ ಕೈಗಳಿಗೆ ಕೊಟ್ಟ ಮೋದಿ, ಪ್ರಧಾನಿಯಾದ ಬಳಿಕ ಇಡೀ ದೇಶವನ್ನೇ ಅವರ ವಶಕ್ಕೆ ಒಪ್ಪಿಸಿದರು. ಅದಾನಿ, ಅಂಬಾನಿ ಅವರ ಜೇಬುಗಳನ್ನು ತುಂಬಿಸುತ್ತ, ಸಾಮಾನ್ಯ ಜನರನ್ನು ಮರೆತರು. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ, ಒಬ್ಬ ಸಂತ್ರಸ್ತನ ಕುಟುಂಬಕ್ಕೂ ಸಾಂತ್ವನ ಹೇಳಲಿಲ್ಲ.’

‘ಮತದಾನಕ್ಕೆ ಕೇವಲ ಎರಡು ವಾರಗಳು ಬಾಕಿ ಇವೆ. ಆದರೂ, ಮೋದಿ ರಾಜ್ಯಕ್ಕೆ ಬರುವ ಮನಸ್ಸು ಮಾಡುತ್ತಿಲ್ಲ. ಏಕೆಂದರೆ 2 ಕೋಟಿ ಉದ್ಯೋಗಾವಕಾಶ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹ 15 ಲಕ್ಷ ಜಮಾ ಮಾಡುವುದು.. ಸೇರಿದಂತೆ ಹಲವಾರು ಸುಳ್ಳು ಭರವಸೆಗಳನ್ನು ಕೊಟ್ಟಿರುವ ಅವರು, ಇದೀಗ ಆ ಪ್ರಶ್ನೆಗಳಿಗೆ ಉತ್ತರಿಸುವ ಶಕ್ತಿ ಕಳೆದುಕೊಂಡಿದ್ದಾರೆ’ ಎಂದು ಕುಟುಕಿದರು.

ನಟ ಪ್ರಕಾಶ್ ರೈ, ‘ಬಿಜೆಪಿಗೆ ಯಾವುದೇ ಸಿದ್ಧಾಂತ ಇಲ್ಲ. ಏಕೆಂದರೆ, ಅದು ಪಕ್ಷವೇ ಅಲ್ಲ. ಆರ್‌ಎಸ್‌ಎಸ್‌ಗೆ ಕೆಲಸ ಮಾಡುತ್ತಿರುವ ಒಂದು ಸಂಸ್ಥೆ. ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ ಅವರೆಲ್ಲ ಸಂಸ್ಥೆಯ ಬೆದರು ಗೊಂಬೆಗಳು’ ಎಂದು ವ್ಯಂಗ್ಯವಾಡಿದರು.

‘ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸೇರಿದಂತೆ ಬಿಜೆಪಿ ನಾಯಕರೆಲ್ಲ ಈಗ ಮೌನಕ್ಕೆ ಶರಣಾಗಿದ್ದಾರೆ. ಬಾಯಿ ಬಿಟ್ಟರೆ ಬಂಡಗೇಡು ಎನ್ನುವಂತಾಗಿದೆ ಅವರ ಪಾಡು.’

‘ಯಡಿಯೂರಪ್ಪ ಅವರೇ.. ನೀವು ಎಂಥ ರಾಜಕಾರಣಿ. ನಿಮ್ಮ ವಯಸ್ಸೇನು? ಹೋಗಿ.. ಹೋಗಿ.. ಆ ಅಮಿತ್ ಶಾ ಕಾಲಿಗೆ ಬೀಳುತ್ತೀರಲ್ಲ. ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುವ ಕನಸು ಕಾಣುತ್ತಿದ್ದೀರಿ. ಆದರೆ, ಶಾ ಹಾಗೂ ಮೋದಿ ನಿಮ್ಮನ್ನು ಪುಟ್ಬಾಲ್‌ನಂತೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ನೆನಪಿರಲಿ’ ಎಂದರು.

ಅಲಹಾಬಾದ್ ವಿದ್ಯಾರ್ಥಿ ನಾಯಕಿ ರಿಚಾ ಸಿಂಗ್, ‘ಈ ದೇಶ ನಿರ್ಮಾಣವಾಗಿರುವುದು ವಿವಿಧ ಜಾತಿ, ಮತ–ಧರ್ಮದ ಬುನಾದಿಯಲ್ಲೇ. ಪ್ರತಿ
ಯೊಬ್ಬರಿಗೂ ಬದುಕುವ ಹಕ್ಕನ್ನು ಸಂವಿಧಾನ ಕಲ್ಪಿಸಿದೆ. ಆದರೆ, ಬಿಜೆಪಿ ಜನರ ಬದುಕುವ ಹಕ್ಕನ್ನೇ ಸರ್ವನಾಶ ಮಾಡಿದೆ. ಗೋವಿನ ವಿಚಾರವಾಗಿ ಮುಸ್ಲಿಮರನ್ನು ಕೊಲ್ಲುತ್ತಿದೆ. ಇಂಥ ಕೋಮುವಾದಿಗಳ ವಿರುದ್ಧ ಸೆಟೆದು ನಿಲ್ಲಬೇಕಿದೆ’ ಎಂದರು.

‘ದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಬಿಜೆಪಿ ಪಕ್ಷದಲ್ಲೇ ಅತ್ಯಾಚಾರಿಗಳಿದ್ದಾರೆ. ತಾವು ಮಾತ್ರ ಕೋಟಿ–ಕೋಟಿ ಲೂಟಿ ಹೊಡೆದು ಐಷಾರಾಮಿ ಜೀವನ ನಡೆಸುತ್ತಿರುವ ಮೋದಿ, ದೇಶದ ಯುವಕರಿಗೆ ಪಕೋಡ ಮಾರಿಕೊಂಡು ಬದುಕುವಂತೆ ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.

‘ಮುದ್ದಿನ ಗಿಣಿ ಜತೆ ಕಣ್ಮರೆ’

‘ಯಡಿಯೂರಪ್ಪ ಹಾಗೂ ಎಚ್‌.ಡಿ.ಕುಮಾರಸ್ವಾಮಿ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇದೇ ಮೇ 15ರಂದು ಫಲಿತಾಂಶ ಬರುತ್ತದೆ. ಆ ನಂತರ ಯಡಿಯೂರಪ್ಪ ತಮ್ಮ ಮುದ್ದಿನ ಗಿಣಿ ಶೋಭಾ ಕರಂದ್ಲಾಜೆ ಜತೆ ಕಣ್ಮರೆಯಾಗುತ್ತಾರೆ. ಕುಮಾರಸ್ವಾಮಿ ಕಣ್ಣೀರು ಹಾಕಿಕೊಂಡು ಕೂರುತ್ತಾರೆ’ ಎಂದು ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ವ್ಯಂಗ್ಯವಾಡಿದರು.
ಕೃಪೆ: ಪ್ರಜಾವಾಣಿ

Comments