ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥರಾಗಿ ಬಾಜ್ವಾ ಅಧಿಕಾರ ಸ್ವೀಕಾರ

Tuesday, November 29 2016
img

ಇಸ್ಲಾಮಾಬಾದ್ (www.asiavisionnews.com): ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥರಾಗಿ ಜನರಲ್ ಖಮರ್ ಜಾವೆದ್ ಬಾಜ್ವಾ ಅವರು ಮಂಗಳವಾರ ಅಧಿಕಾರಿ ಸ್ವೀಕರಿಸಿದ್ದಾರೆ.

ನಿವೃತ್ತ ಸೇನಾ ಮುಖ್ಯಸ್ಥ ರಾಹೀಲ್ ಷರೀಫ್ ಅವರ ಅಧಿಕಾರಾವಧಿ ಇಂದಿಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಜನರಲ್ ಖಮರ್ ಜಾವೆದ್ ಬಾಜ್ವಾ ಅವರಿಗೆ ಇಂದು ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಿದ್ದಾರೆ. ಆ ಮೂಲಕ ಪಾಕಿಸ್ತಾನದ 16ನೇ ಸೇನಾ ಮುಖ್ಯಸ್ಥರಾಗಿ ಜನರಲ್ ಖಮರ್ ಜಾವೆದ್ ಬಾಜ್ವಾ ಅವರು ನೇಮಕವಾಗಿದ್ದಾರೆ. ಪಾಕಿಸ್ತಾನ ಸೇನಾ ಹೆಡ್ ಕ್ವಾರ್ಟರ್ಸ್ ಸಮೀಪದಲ್ಲೇ ಇರುವ ಹಾಕಿ ಸ್ಟೇಡಿಯಂನಲ್ಲಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಬಾಜ್ವಾ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ನಿವೃತ್ತ ಸೇನಾ ಮುಖ್ಯಸ್ಥ ರಾಹೀಲ್ ಷರೀಫ್ ಅವರು, ದೇಶದ ಆಂತರಿಕ ಮತ್ತು ಬಾಹ್ಯ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ಸರ್ಕಾರದ ಎಲ್ಲ ಸಂಸ್ಥೆಗಳು ಸಾಮೂಹಿಕವಾಗಿ ಹೋರಾಡುವ ಅಗತ್ಯವಿದೆ ಎಂದು ಹೇಳಿದರು. ಇದೇ ವೇಳೆ ತಮ್ಮ ಆಡಳಿತಾವಧಿಯಲ್ಲಿ ಕರ್ತವ್ಯ ನಿರ್ವಹಣೆಗೆ ನೆರವು ನೀಡಿದ ಪಾಕಿಸ್ತಾನ ಸರ್ಕಾರ ಹಾಗೂ ರಾಜಕೀಯ ಮುಖಂಡರಿಗೆ ರಾಹೀಲ್ ಷರೀಫ್ ಅವರು ಧನ್ಯವಾದ ತಿಳಿಸಿದರು.

ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಮಾಹಿತಿ ಸಚಿವ ಮರ್ರಿಯುಮ್ ಔರಂಗಜೇಬ್ ಹಾಗೂ ನ್ಯಾಷನಲ್ ಅಸೆಂಬ್ಲಿಯ ಸ್ಪೀಕರ್ ಅಯಾಜ್ ಸಾದಿಕ್ ಸೇರಿದಂತೆ ಹಲವು ಸರ್ಕಾರದ ಗಣ್ಯರು ಪಾಲ್ಗೊಂಡಿದ್ದರು.

Comments